ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ
 CSIR-CFTRI ಕುರಿತು
 ಇತ್ತೀಚಿನ ವಿಜ್ಞಾನ ಮತ್ತು ತಂತ್ರಜ್ಞಾನದ ಸಾಧನೆಗಳು
 ಮಾನವ ಸಂಪನ್ಮೂಲ ಅಭಿವೃದ್ಧಿ
 ಸೇವಾ ಸೌಲಭ್ಯಗಳು 
 ಸಂಪರ್ಕಿಸಿ
ANNUAL REPORT
Home
ನಿರ್ದೇಶಕರ ಮೇಜಿನಿಂದ

image

ನಮಸ್ಕಾರ, ಸಿಎಸ್ಐಆರ್- ಕೇಂದ್ರೀಯ ಆಹಾರ  ತಾಂತ್ರಿಕ ಸಂಶೋಧನಾಲಯದ ಶುಭಾಶಯಗಳು.

ನಮ್ಮ ಸಂಸ್ಥೆ, ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯವು ತನ್ನ ಅರಂಭದ ದಿನಗಳಿಂದಲೂ ಅಂದರೆ ಅಕ್ಟೋಬರ್ 21, 1950 ರಿಂದಲೂ, ದೇಶವನ್ನು ಕಾಡುತ್ತಿರುವ ಆಹಾರ ಮತ್ತು ಪೌಷ್ಟಿಕತೆಯ ಸುಭದ್ರತೆಯ ಅತಿ ದೊಡ್ಡ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ನಿರಂತರವಾಗಿ ಹೆಚ್ಚುತ್ತಿರುವ ಜನಸಂಖ್ಯೆ, ಕ್ಷೀಣಿಸುತ್ತಿರುವ ಕೃಷಿಭೂಮಿ ಇವುಗಳ ಒತ್ತಡದಲ್ಲಿ, ಕೃಷಿಯನ್ನೇ ಬಹುವಾಗಿ ನೆಚ್ಚಿಕೊಂಡಿರುವ ನಮ್ಮ ದೇಶ, ತನ್ನ ಜನತೆಯ ಸ್ವಾವಲಂಬನೆ ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳಲು ಹೆಣಗಾಡಬೇಕಾಗುತ್ತಿದೆ. ಈ ಸಮಸ್ಯೆ ಹೊಸದೇನಲ್ಲ, ಬಹಳ ಹಿಂದಿನದ್ದೇ. ಆಹಾರ ಭದ್ರತೆಯನ್ನು ಕುರಿತ ಕಾಳಜಿ ನಮ್ಮ ಚರಿತ್ರೆಯ ಪುಟಗಳಲ್ಲಿ ಕಂಡುಬರುವಂಥದ್ದೇ. ಕೈಗೆಟುಕುವ ಬೆಲೆಗೆ ಅವಶ್ಯಕ ಪ್ರಮಾಣದಲ್ಲಿ ಉತ್ತಮ ಗುಣಮಟ್ಟದ ಆಹಾರವನ್ನು ಎಲ್ಲರಿಗೂ ಒದಗಿಸುವುದು  ನಮ್ಮ ಎದುರಿಗೆ ಇರುವ ಬಹುದೊಡ್ಡ ಸವಾಲಾಗಿದ್ದು, ಅದು ಜನತೆಯನ್ನು ಅಪೌಷ್ಟಿಕತೆಯ ಕೂಪಕ್ಕೆ ತಳ್ಳುತ್ತಿದೆ.   ಅದರಲ್ಲೂ ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಕಂಡುಬರುವ ಅಪೌಷ್ಟಿಕತೆಯ ಪ್ರಮಾಣ ಆಗಾಧವಾದ್ದು. ಈ ಅಪೌಷ್ಟಿಕತೆಯನ್ನು “ಭಾರತದ ನಿಶ್ಶಬ್ಧ ತುರ್ತುಸ್ಥಿತಿ” ಎಂದು ವಿಶ್ವಬ್ಯಾಂಕ್ ವಿವರಿಸಿದೆ, ಇಂತಹ ಗುರುತರವಾದ ಸಮಸ್ಯೆಯನ್ನು ನಾವು ನೀಗಿಸಲೇಬೇಕಿದೆ. ಒಂದು ರಾಷ್ಟ್ರೀಯ ಸಂಸ್ಥೆಯಾಗಿ, ಈ ಸಮಸ್ಯೆಗೆ ಸೂಕ್ತವಾದ ಪರಿಹಾರ ಮಾರ್ಗಗಳನ್ನು ತೋರುವ ಪ್ರಮುಖವಾದ, ಜವಾಬ್ದಾರಿಯುತವಾದ ಪಾತ್ರ ನಮ್ಮದಾಗಿದೆ.

ದೇಶದ ಆಹಾರ ತಂತ್ರಜ್ಞಾನ ಕ್ಷೇತ್ರಕ್ಕೆ, ಅದರ ಬೆಳವಣಿಗೆಗೆ ಕಳೆದ  ಆರು ದಶಕಗಳಲ್ಲಿ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯವು ನೀಡಿರುವ ಕೊಡುಗೆ ಗಮನಾರ್ಹವಾದುದು. ಸಂಸ್ಥೆಯು ಸಹಯೋಗಿಯಾಗಿ ನಡೆಸಿರುವ ಹಲವಾರು ಕಾರ್ಯಗಳಲ್ಲಿ ಪ್ರಶಂಸನೀಯವಾದ ಮಹತ್ತರ ಸಾಧನೆ ಮಾಡಲಾಗಿದೆ. ಎಲ್ಲ ವಯೋವರ್ಗದ ಜನರಿಗೂ ಅನುಕೂಲವಾಗುವಂತಹ ಹಲವಾರು ಪೌಷ್ಟಿಕ ಉತ್ಪನ್ನಗಳು ಅಭಿವೃದ್ಧಿಗೊಂಡಿವೆ. ಮಾರುಕಟ್ಟೆಯ ಕ್ಷೇತ್ರಕ್ಕೆ ಪ್ರವೇಶ ಮಾಡಿರುವ ನಮ್ಮ ಹತ್ತು ಹಲವು ತಂತ್ರಜ್ಞಾನಗಳು ಸಾಕಷ್ಟು ಜನಪ್ರಿಯವಾಗಿವೆ. ಪ್ರತಿಯೊಬ್ಬ ಭಾರತೀಯನನ್ನೂ ತಲುಪಿವೆ. ಅವರ ದೈನಂದಿನ ಜೀವನದ ಮೇಲೆ ಗಾಢವಾದ ಪ್ರಭಾವ ಬೀರಿವೆ. ನಮ್ಮಲ್ಲಿನ ಸಮರ್ಥ ವಿಜ್ಞಾನಿಗಳು ಹಲವಾರು ತಂತ್ರಜ್ಞಾನಗಳ, ಉತ್ಪನ್ನಗಳ ಪರಿಕಲ್ಪನೆ ಮಾಡಿಕೊಂಡು, ಸಂಸ್ಥೆಯ ದಕ್ಷ  ಸೇವಾ ವಿಭಾಗಗಳ ಬೆಂಬಲದಿಂದ ಅವುಗಳನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತಂದಿದ್ದಾರೆ. ಅಲ್ಲದೆ  ವಿನೂತನವಾದ ತಂತ್ರಜ್ಞಾನಗಳು, ಉತ್ಸಾಹಿ ಯುವ ಸಂಶೋಧಕರು ಹಾಗೂ ವಿದ್ಯಾರ್ಥಿಗಳ ಕೌಶಲ್ಯ ಇವುಗಳ  ವೈಜ್ಞಾನಿಕ ಮೇಳೈಸುವಿಕೆಯಿಂದ ನಾವು ಇನ್ನೂ ಬಹಳ ಹೆಚ್ಚಿನದನ್ನು ಸಾಧಿಸಬಲ್ಲೆವೆಂಬುದು ನಿಶ್ಚಿತ.

ದೇಶಕ್ಕಾಗಿ ದುಡಿಯುವ, ಸೇವೆ ಮಾಡುವ ಸೌಭಾಗ್ಯ ನಮ್ಮದು. ಇಂತಹ ಪ್ರತಿಯೊಂದು ಅವಕಾಶವನ್ನೂ ನಾವು ನಮ್ಮ ಸಂಶೋಧನಾಲಯದಲ್ಲಿ ಎದುರು ನೋಡುತ್ತಿರುತ್ತೇವೆ. ನೀವು ಒಬ್ಬ ಸಂಭವನೀಯ ವಿಜ್ಞಾನಿಯಾಗಿರಲಿ, ವಿದ್ಯಾರ್ಥಿಯಾಗಿರಲಿ, ಕೈಗಾರಿಕೋದ್ಯಮಿಯಾಗಿರಲಿ, ಉದ್ಯಮಶೀಲರಾಗಿರಲಿ, ಸುನಿಶ್ಚಿತವಾದ  ನಮ್ಮ ಗುರಿಯೆಡೆಗೆ ಸ್ಪಂದಿಸುವವರಾಗಿದ್ದರೆ ನಿಮಗಿದೋ ಸ್ವಾಗತ. ನಿಮ್ಮನ್ನು ಸಹಭಾಗಿಗಳಾಗಿಸಿಕೊಂಡು ಮುನ್ನಡೆಯುವ ಸಂತಸ ನಮ್ಮದು.

ನೀವು ಅರಸುತ್ತಿರುವ, ನಿಮಗೆ ಪ್ರಸ್ತುತವೆನಿಸುವ ಮಾಹಿತಿಯನ್ನು ನಿಮಗೆ ಒದಗಿಸುವಲ್ಲಿ ಈ ತಾಣ ನಿಮಗೆ ಸಹಾಯಮಾಡಲಿದೆ.

ಗುಡಲಕ್ !

ನಮ್ಮ ಜಾಲತಾಣಕ್ಕೆ ಭೇಟಿನೀಡಿದ್ದಕ್ಕೆ ಧನ್ಯವಾದಗಳು !

(ಪ್ರೋ. ರಾಮ್ ರಾಜಶೇಖರನ್)
ನಿರ್ದೇಶಕರು, ಸಿಎಸ್ಐಆರ್-ಸಿಎಫ್ ಟಿಆರ್ ಐ